ಗುರುವೇ ನಿಮ್ಮ ಮಹಿಮೆ ಅರಿವೇ ವಿಚಿತ್ರವೆಂದು
Category: ಶ್ರೀಗುರು
Author: ವಿಜಯದಾಸ
ಗುರುವೇ ನಿಮ್ಮ ಮಹಿಮೆ ಅರಿವೇ ವಿಚಿತ್ರವೆಂದು
ಕರವೇ ವಂದಿಸಿ-ನಮಸ್ಕರಿಸಿ ಮಾತನುಸುರುವೆ
ಪರಮಾದರದಲಿ ಕರುಣ ಎನ್ನ ಮೇಲೆ
ಹರಹಿ ದುರುಮತಿಯ ಪರಿಹರಿಸುವುದು
ವಾತತನಯ ವಾರಿಜಾತ ಬಾಂಧವ ಸಂ
ಭೂತ ಸಹಾಯ ರಘುನಾಥನ್ನ ಪ್ರಿಯದೂತ
ಶಾತಕುಂಭ ಮಕುಟ ಶೀತಕರ ಕುಂಡಲ-
ತೀತ ಸುಂದರ ಕಾಯ-ಜಾತ ಶರವರ್ಜಿತ
ದಾತನಿಂದಲಿ ಬಹಳಾತುರದಲಿ ಗು-
ರುತು ಪಡೆದು ನಿರ್ಭೀತನಾಗಿ ಪೋಗಿ
ಮಾತೆಗೆರಗಿ ಖಳವ್ರಾತವ ಘಾತಿಸಿ
ಪ್ರೀತಿಯಿಂದಲಿ ನಿಜರಾತಿಯ ತಣಿಸಿದ ||1||
ಪಾಂಡುತನಯ ಗಿರಿ ಖಂಡಿತ ಶತಶೃಂಗ
ಮಂಡಲದೊಳಗೆ ಉದ್ದಂಡ ವಿಷವನುಂಡು
ಕುಂಡಲಿಯಿಂದ ಕೈಗೊಂಡು ಮನ್ನಣೆಯ
ಚಂಡಗದೆಯ ದಿಟ್ಟ ಗಂಡುಗಲಿ ಪ್ರಚಂಡ
ಹಿಂಡು ಖಳರ ಶಿರ ಚೆಂಡಾಡಿ ಗುರು ಕೋ
ದಂಡ ರುದ್ರನ ಮುಂಕೊಂಡು ಭಜಿಸಿ ರಣ
ಮಂಡಲದೊಳು ಜಗಭಂಡನ ಕರುಳನು
ದಂಡೆಯ ಮುಡಿಸಿದ ಖಂಡ ಪ್ರತಾಪ ||2||
ದ್ವಿಜನ ಉದರದಲ್ಲಿ ಸೃಜಿಸಿ ಮೆರೆದೆಯೊ
ತ್ರಿಜಗದೊಳಗೆ ಶುದ್ಧ ಸುಜನಾಂಬುಧಿಗೆ ಚಂದ್ರ
ಕುಜನ ಮತ ಭುಜಂಗ ದ್ವಿಜರಾಜನೆನಿಸಿದೆ
ಅಜನ ಪಿತನ ಪಾದಾಂಬುಜವ ಬಿಡದೆ ನಿತ್ಯ-
ಭಜಿಸುವೆ ಯತಿ ದಿಗ್ವಿಜಯ ಮೂರುತಿ ಸುರ-
ವ್ರಜವ ಪಾಲಿಪ ಪಂಕಜ ಭವ ಪದವಿಯ
ನಿಜವಾಗಿ ಕೈಗೊಂಡು ಋಜುಗಣದಧಿಪ ತಿವಿಜಯವಿಠ್ಠಲನಂಘ್ರಿರಜವನು ಧರಿಸಿದ ||3||