ಗೌರೀವರನೆ ಎನ್ನ ಮೊರೆ ಕೇಳೊ ಚೆನ್ನ

Category: ಶ್ರೀಶಿವ

Author: ವಿಜಯದಾಸ

ಗೌರೀವರನೆ ಎನ್ನ ಮೊರೆ ಕೇಳೊ ಚೆನ್ನ
ಹೌರನೆ ಮತಿಯಿತ್ತು ಸಲಬೇಕೆನ್ನ
ಗೌರವ ಗಾತುರ ತೌರ ಮನೆಯ ಹರ
ಕೌರವಾಂತಕನೊಳು ಶೌರಿಯ ತೋರಿಸೋ

ಮೃಗಲಾಂಛನ ಸನ್ಮೌಳಿ ಶಿವ ಮಹಾದೇವ
ತ್ರಿಗುಣಾತುವ ಗಾತುರ ಭಕ್ತ ಸಂಜೀವ
ನಿಗಮತುರಗ ಪಾವ ವನಮಾಲ ಪಾವಾ
ಮೃಗಪಾಣಿ ಮೃತ್ಯುಂಜಯ ಸುಪ್ರಭಾವ
ನಗೆಪಗೆ ಮಗನನು ಮೃಗನೆವನದಿ ಕಾ
ಳಗಮಾಡಿ ಮೆಚ್ಚಿದೆ ಅಗಣಿತ ಗುಣಮಣಿ
ಯುಗಯುಗದಲಿ ವಾಲಗ ನಿನ್ನವರೊಳು
ಮಗಳೆ ಮಗುಳೆ ಕೊಡು ಗಗನೇಶ ಜನಕ ||1||

ಭವಹರ ತ್ರಿಯಂಬಕ ತ್ರಿಪುರಾರಾತಿ
ಪವನ ಸಪುತ ಸಪ್ತ ವಂದಿತ ಖ್ಯಾತಿ
ಅವನಿಯೋಳ್ ಕೈಲಾಸ ವಾಸ ಅಪ್ರತಿ
ನವ ವಿಧ ಭಕುತಿ ಕೊಡು ಶಂಭು ಪಶುಪತಿ
ದಿವಸ ದಿವಸ ವೈಶ್ರವಣ ಬಾಂಧವ ದೇ
ಹವೆ ನಿನಗೊಪ್ಪಿತು ಅವನಿಯೊಳುತ್ತಮ
ಶ್ರವಣದೊಳಗೆ ರಾಘವನ ಕಥಾಮೃತ
ಸವಿದೋರುವುದೋ ಭುವನ ಪವಿತ್ರ ||2||

ಅಜಭೃಕುಟ ಸಂಭೂತ ಭೂತಗಣೇಶ
ಭುಜಗ ಕುಂಡಲ ಮಾಲಾ ವಿಭೂತಿ ಭೂಪ
ನಿಜ ಮಹಾ ಸ್ಮಶಾನವಾಸ ಉಗ್ರೇಶ
ತ್ರಿಜಗಪಾವನ ಗಂಗಾಧರ ವಿಶ್ವೇಶ
ಸುಜನರ ಹೃದಯ ಪಂಕಜದೊಳ್ ಮಿನುಗುವ
ಗಜ ಪಾಲಕ ರಂಗ ವಿಜಯವಿಠ್ಠಲನಂಘ್ರಿ
ಭಜನೆಯ ಕೊಡು ಭೂಭುಜ ದೇವೋತ್ತಮ
ರಜತಾದ್ರಿ ನಿಲಯನೆ ಗಜ ಅಜಿನಾಂಬರ ||3||