ಛೀ ಹಳಿ ಥೂ ಖೋಡಿ

Category: ವೈರಾಗ್ಯ

Author: ವಿಜಯದಾಸ

ಛೀ ಹಳಿ ಥೂ ಖೋಡಿ ಪಾಪಿ ಮನವೆ, ನಿನ್ನ
ಕುಹಕ ಬುದ್ಧಿಗಳೆಲ್ಲ ಬಿಡು ಕಂಡ್ಯ ಮನವೆ

ಬಣ್ಣದ ಬೀಸಣೆಗ್ಯಂತೆ ಹೆಣ್ಣು ತಿರುಗೋದ ಕಂಡು
ಕಣ್ಣು ಸನ್ನೆಯಮಾಡಿ ಕೈ ಹೊನ್ನು ತೋರಿ
ತಣ್ಣೀರು ಹೊಯಿದ ಹೊಸ ಸುಣ್ಣದಂತೆ ಕುದಿದು ನಿನ್ನ
ಕಣ್ಣಿಗೆ ಮಣ್ಣು ಚೆಲ್ಲಿಕೊಂಬರೆ ಮನವೆ ||1||

ನೆರೆಹೊರೆ ಮನೆಗಳಲಿ ಪ್ರಸ್ಥವನ್ನು ಮಾಡಿದರೆ
ಕರೆಯದೆಲೆ ಮೊದಲ್ಹೋಗಿ ಹಾಳು ಹರಟೆ
ಬಡಿಗಂಟು ಸುದ್ದಿ ನೂರಾರು ಹೇಳಿ ಅವರ
ಹಿರಿಯ ಮಗನಂತೆ ಉದರವ ಪೊರೆವೆ ಮನವೆ ||2||

ಉತ್ತಮಾನ್ನವ ನೀಡೆ ಮುಸುರೆ ಬಯಸುವಂತೆ
ಚಿತ್ತದೊಲ್ಲಭನ ಸಂಗಡದಿ ನಲಿದು
ಮತ್ತೆ ಉಪರತಿಗೆ ಪರಪುರುಷನ ಬಯಸುವ
ತೊತ್ತು ಬುದ್ಧಿಯನೆಲ್ಲ ಬಿಡು ಕಂಡ್ಯ ಮನವೆ ||3||

ಪಗಡೆ ಚದುರಂಗ ಕವಡೆಯನಾಡ ಕರೆದರೆ
ನಿಗುರುವುವು ಕರ್ಣಗಳು ಮೊಚ್ಚೆಯಂತೆ
ಜಗದೀಶನ ದಿನದಿ ಜಾಗರಕೆ ಕರೆದರೆ
ಮುಗಿಲ್ಹರಿದು ಬಿದ್ದಂತೆ ಧರೆಗಿಳಿವೆ ಮನವೆ ||4||

ವಾಸುದೇವನ ಪೂಜೆಯೊಮ್ಮೆ ಮಾಡೆಂದರೆ
ಬೇಸತ್ತು ತಲೆಯ ಚಿಟ್ಟಿಕ್ಕಿ ಕುಳಿತೆ
ಆ ಸಮಯದೊಳಗೊಬ್ಬ ಕಾಸು ಕೊಟ್ಟೇನೆನಲು
ದಾಸಿ ಮಗನಂತೆ ಬೆನ್ನಟ್ಟಿ ಪೋದೆ ಮನವೆ ||5||

ಕುಳ್ಳಿರುವ ಸ್ಥಳವೆಷ್ಟು ಕೂಳು ತಿಂಬುವುದೆಷ್ಟು
ಉಳ್ಳನಕ ಕೀರ್ತಿಯಪಕೀರ್ತಿಯೆಷ್ಟು
ಗುಳ್ಳೆಯಂದದ ದೇಹನೆಚ್ಚಿ ನೀ ಕೆಡಬೇಡ
ಉಳ್ಳಿಪರೆ ಸುಲಿದರೆ ಹುರುಳಿಲ್ಲ ಮನವೆ ||6||

ಬಿಂದು ಮಾತ್ರವೊ ಸುಖವು ದು:ಖ ಪರ್ವತದಷ್ಟು
ಸಂದೇಹವಿಲ್ಲವಿದು ಶಾಸ್ತ್ರಸಿದ್ಧ
ಎಂದೆಂದು ಸಿರಿಯರಸ ವಿಜಯವಿಠ್ಠಲನಂಘ್ರಿ
ಕುಂದದೆ ಹೃದಯದೊಳು ನೆನೆಕಂಡ್ಯ ಮನವೆ ||7||